ಹಲಸಿನ ಹಪ್ಪಳ
ಮಾಡಲು ಬೇಕಾಗುವ ಸಾಮಾಗ್ರಿಗಳು:
- 2 ಚಮಚ ಕೆಂಪು ಮೆಣಸಿನ ಪುಡಿ
- ಸ್ವಲ್ಪ ಹುಣಸೆ ಹುಳಿ
- ರುಚಿಗೆ ತಕ್ಕಷ್ಟು ಉಪ್ಪು
- 1 ಮಧ್ಯಮ ಗಾತ್ರದ ಹಲಸಿನ ಕಾಯಿ
- 2 ಸಣ್ಣ ಪ್ಲ್ಯಾಸ್ಟಿಕ್ ಶೀಟ್‌ಗಳು, 1 ದೊಡ್ಡ ಪ್ಲ್ಯಾಸ್ಟಿಕ್ ಶೀಟ್ ಅಥವಾ ಕಾಟನ್ ಬಟ್ಟೆ
ಮಾಡುವ ವಿಧಾನ:
- ಹಲಸಿನ ಕಾಯಿಯನ್ನು ಹೆಚ್ಚಿ ತೊಳೆಗಳನ್ನು ಬಿಡಿಸಿ. ಹಲಸಿನ ಕಾಯಿ ಸ್ವಲ್ಪ ಸಿಹಿ ಪಡೆದಿದ್ದರೆ ಉತ್ತಮ. ಈ ತೊಳೆಗಳನ್ನುಇಡ್ಲಿ ಪಾತ್ರೆಯಲ್ಲಿ ಚೆನ್ನಾಗಿ ಬೇಯಿಸಿ.
- ಗ್ರೈಂಡರ್‌ಗೆ ಬೇಯಿಸಿದ ಸೊಳೆಯನ್ನು ಹಾಕಿ, ಅದಕ್ಕೆ ಖಾರ, ಉಪ್ಪು ಹಾಗೂ ಸ್ವಲ್ಪ ಹುಳಿ ಹಾಕಿ. ಪೂರ್ತಿ ನುಣ್ಣಗೆ ತಿರುಗಿಸಿ. (ಸಾಮಾನ್ಯವಾಗಿ ಈ ತೊಳೆಗಳನ್ನು ಒನಕೆಯಿಂದ ಕುಟ್ಟಿ ಪೇಸ್ಟ್ ಮಾಡಲಾಗುತ್ತದೆ. )
- ಈ ಪೇಸ್ಟನ್ನು ತೆಗೆದುಕೊಂಡು ಒದ್ದೆ ಕೈಯ್ಯಲ್ಲಿ ನಿಂಬೆಹಣ್ಣಿನ ಗಾತ್ರದ ಉಂಡೆ ಮಾಡಿಕೊಳ್ಳಿ. ನಂತರ ಎರಡು ಪ್ಲ್ಯಾಸ್ಟಿಕ್ ಶೀಟ್ (ಪಾಲಿಥಿನ್)ಗಳಿಗೆ ಎಣ್ಣೆ ಸವರಿಕೊಳ್ಳಿ.
- ಒಂದು ಶೀಟ್ ಮೇಲೆ ಹಲಸಿನ ಉಂಡೆಯಿಟ್ಟು ಮೇಲೆ ಇನ್ನೊಂದು ಶೀಟ್‌ನಿಂದ ಮುಚ್ಚಿ ಬಿಡಿ. ಇದರ ಮೇಲೆ ಮರದ ಮಣೆ ಇಟ್ಟು ಒತ್ತಿ.
- ಬಳಿಕ ನಿಧಾನವಾಗಿ, ಮೇಲಿನ ಪಾಲಿಥಿನ್ ಶೀಟ್ ಎತ್ತಿದರೆ ಚಪಾತಿಯಂತೆ ಹಿಟ್ಟು ಹರಡಿರುತ್ತದೆ.
- ಇವುಗಳನ್ನು ದೊಡ್ಡದಾದ ಪ್ಲ್ಯಾಸ್ಟಿಕ್ ಇಲ್ಲವೇ ಸ್ವಚ್ಛವಾದ ಬಟ್ಟೆ ಮೇಲೆ ಒಂದರ ಪಕ್ಕ ಒಂದನ್ನು ಹಾಕಿ 3-4 ಗಂಟೆಗಳ ಕಾಲ ಬಿಸಿಲಿನಲ್ಲಿಡಿ.
- ನಂತರ ಒಮ್ಮೆ ಎಲ್ಲ ಹಪ್ಪಳಗಳನ್ನು ತಿರುವಿ ಹಾಕಿ. ಮತ್ತೆ 3-4 ಗಂಟೆ ಬಿಡಿ. ಎರಡರಿಂದ ಮೂರು ದಿನ ಒಣಗಿಸಿದ ಬಳಿಕ ಹಪ್ಪಳಗಳನ್ನು ಡಬ್ಬಿಯಲ್ಲಿ ಹಾಕಿ ತೆಗೆದಿಟ್ಟುಕೊಳ್ಳಿ. ಬೇಕೆಂದಾಗ ಎಣ್ಣೆಯಲ್ಲಿ ಕರಿದರೆ ಆಯ್ತು. ಇದನ್ನು ವರ್ಷಗಟ್ಟಲೆ ಇಟ್ಟುಕೊಳ್ಳಬಹುದು.
Tags
ಹಲಸಿನ ಹಪ್ಪಳ